ಕಸೂರ್

 ಪಶ್ಚಿಮ ಪಾಕಿಸ್ಥಾನದ ಲಾಹೋರ್ ಜಿಲ್ಲೆಯ ಪಟ್ಟಣ. ಬೀಯಾಸ್ ನದಿಯ ಹಳೆಯ ದಡದ ಮೇಲೆ ಲಾಹೋರಿಗೆ ದಕ್ಷಿಣಾಗ್ನೇಯದಲ್ಲಿ 34 ಮೈಲಿಗಳ ದೂರದಲ್ಲಿದೆ. ಭಾರತದ ಅಮೃತಸರ ಮತ್ತು ಫಿರೋeóïಪುರಗಳ ಮೇಲಿರುವ ಖೆಮ್ ಕರನ್ ಮತ್ತು ಹುಸೇನಿವಾಲ ಇದರ ಎದುರಿಗೆ ಗಡಿಯಾಚೆ ಇರುವ ಪಟ್ಟಣಗಳು. ಕಸೂರಿನ ಜನಸಂಖ್ಯೆ 74,546 (1961). ಕೋಟೆಗಳಿಂದ ಕೂಡಿದ (26) ಗ್ರಾಮಗಳನ್ನು ಇದು ಒಳಗೊಂಡಿದೆ. ಇವು ಹಬ್ಬಿರುವ ಸ್ಥಳದ ವಿಸ್ತೀರ್ಣ 4 ಚ.ಮೈ.

 ಕಸೂರ್ ಉಣ್ಣೆಯ ವ್ಯಾಪಾರ ಕೇಂದ್ರ. ಚರ್ಮ ಹದಗಾರಿಕೆ, ಚರ್ಮದ ವಸ್ತುಗಳ ತಯಾರಿಕೆ, ಎಣ್ಣೆ ತೆಗೆಯುವುದು, ಹತ್ತಿ ನೂಲ್ಗೆ ನೇಯ್ಗೆ-ಈ ಕೈಗಾರಿಕೆಗಳಿವೆ.  ಲಾಹೋರ್-ಕರಾಚಿ ಮುಖ್ಯ ರೈಲುಮಾರ್ಗದೊಂದಿಗೆ ಕಸೂರಿಗೆ ಸಂಪರ್ಕವುಂಟು.

 ಶ್ರೀರಾಮನ ಮಕ್ಕಳಾದ ಲವಕುಶರ ಪೈಕಿ ಕುಶನಿಂದ ಕಸೂರು ಲವನಿಂದ ಲಾಹೋರು ಸ್ಥಾಪಿತವಾದುದೆಂದು ಒಂದು ಐತಿಹ್ಯವುಂಟು. 7 ನೆಯ ಶತಮಾನದಲ್ಲಿ ಚೀನೀ ಯಾತ್ರಿಕ ಹುಯನ್ ತ್ಸಾಂಗ್ ಭೇಟಿ ಕೊಟ್ಟಿದ್ದ ಸ್ಥಳಗಳಲ್ಲಿ ಕಸೂರ್ ಒಂದೆಂದು ಇತಿಹಾಸಕಾರ ಜೆ.ಡಿ. ಕನಿಂಗ್‍ಹ್ಯಾಮನ ಅಭಿಪ್ರಾಯ. ಈಗಿನ ಕಸೂರಿನ ನಿವೇಶನದಲ್ಲಿ ಮುಸ್ಲಿಂ ಆಕ್ರಮಣಕ್ಕೂ ಹಿಂದಿನ ಕಾಲದಲ್ಲಿ, ರಜಪೂತರಿಗೆ ಸೇರಿದ್ದ ಒಂದು ಪಟ್ಟಣವಿತ್ತೆಂದು ಕಾಣುತ್ತದೆ.  ಆದರೆ ಮುಸ್ಲಿಮರ ಆಳ್ವಿಕೆಯಾರಂಭವಾದ ಬಹಳ ಕಾಲದವರೆಗೂ ಕಸೂರಿನ ಹೆಸರು ಚರಿತ್ರೆಯಲ್ಲಿ ಎಲ್ಲೂ ಬರುವುದಿಲ್ಲ.  ಮೊಗಲ್ ಚಕ್ರವರ್ತಿ ಬಾಬರನ ಕಾಲದಲ್ಲೋ ಅವನ ಮೊಮ್ಮಗ ಅಕ್ಬರನ ಕಾಲದಲ್ಲೋ ಸಿಂಧೂನದಿಯ ಪೂರ್ವದ ಕಡೆಯಿಂದ ಪಠಾಣರು ಇಲ್ಲಿ ಬಂದು ನೆಲೆಸಿದ್ದಿರಬೇಕೆಂದು ಕಾಣುತ್ತದೆ. ಆಗಲೇ ಇದರ ಹೆಸರು ಇತಿಹಾಸದಲ್ಲಿ ಕಂಡುಬಂದದ್ದು. ಸಿಖ್ಖರು ಪ್ರಬಲರಾದ ಮೇಲೆ ಇದು ರಣಜಿತಸಿಂಗನಿಗೆ ಅಧೀನವಾಯಿತು. 

 

 (ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ